ತೊಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ
- Manjunath Uttarkar

- Aug 12
- 1 min read
Updated: Aug 14

ಗದಗ: ತೊಂಟದಾರ್ಯ ಕಾಲೇಜ್ ಆಫ್ ಇಂಜಿನಿಯರಿಂಗ್, ಗದಗದಲ್ಲಿ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು 12-08-2026 ರಂದು ಕಾಲೇಜಿನ ಗ್ರಂಥಾಲಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಹಾಗೂ ಗ್ರಂಥಾಲಯ ಸಮಿತಿಯ ಅಧ್ಯಕ್ಷರಾದ ಪ್ರೊ. ಸುನೀಲ್ ಪಾಟೀಲ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸಂಶೋಧನಾ ಚಟುವಟಿಕೆಗಳು ಹಾಗೂ ಜ್ಞಾನವೃದ್ಧಿಯಲ್ಲಿ ಗ್ರಂಥಾಲಯ ಮತ್ತು ಗ್ರಂಥಪಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಗ್ರಂಥಾಲಯಗಳು ಕೇವಲ ಸಾಂಪ್ರದಾಯಿಕ ಪುಸ್ತಕ ಸಂಗ್ರಹಣಾ ಕೇಂದ್ರಗಳಾಗಿರದೆ, ಡಿಜಿಟಲ್ ಜ್ಞಾನ, ಇ-ಸಂಪನ್ಮೂಲಗಳು, ಸಂಶೋಧನಾ ಮಾಹಿತಿ ಹಾಗೂ ಸ್ವಯಂ ಕಲಿಕೆಯ ಕೇಂದ್ರಗಳಾಗಿ ರೂಪುಗೊಳ್ಳುತ್ತಿವೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಎಂ. ಅವಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಲಭ್ಯವಿರುವ ಮುದ್ರಿತ ಹಾಗೂ ಡಿಜಿಟಲ್ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಅಗತ್ಯವಾದ ಮಾಹಿತಿಯನ್ನು ತಲುಪಿಸುವಲ್ಲಿ ಗ್ರಂಥಪಾಲಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.
ಆಡಳಿತಮಂಡಳಿಯ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಎಸ್. ಎಸ್. ಪಟ್ಟಣಶೆಟ್ಟಿಯವರು ತಮ್ಮ ಸಂದೇಶದ ಮೂಲಕ, “ಗ್ರಂಥಪಾಲಕರ ನಿಸ್ವಾರ್ಥ ಸೇವೆಯೇ ಜ್ಞಾನದ ರಹದಾರಿ” ಎಂದು ಹೇಳಿದರು. ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹಾಲಯಗಳಲ್ಲದೆ, ಜ್ಞಾನ, ಮಾಹಿತಿ ಮತ್ತು ಸ್ವಯಂ ಕಲಿಕೆಯ ಕೇಂದ್ರಗಳಾಗಿವೆ. ಡಾ. ಎಸ್. ಆರ್. ರಂಗನಾಥನ್ ಅವರ ಕೊಡುಗೆಗಳನ್ನು ಸ್ಮರಿಸಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಹಾಗೂ ಜ್ಞಾನ ಪ್ರಸಾರ ಮಾಡುವಲ್ಲಿ ಗ್ರಂಥಪಾಲಕರ ಸೇವೆಯನ್ನು ಗೌರವಿಸಬೇಕು ಎಂದು ಅವರು ತಿಳಿಸಿದರು.
ಕಾಲೇಜಿನ ಗ್ರಂಥಪಾಲಕರಾದ ಡಾ. ಎಂ. ಬಿ. ಉತ್ತರಕರ ಅವರು ಮಾತನಾಡಿ, ಗ್ರಂಥಪಾಲಕರ ದಿನಾಚರಣೆಯ ಮಹತ್ವ ಹಾಗೂ ಡಾ. ಎಸ್. ಆರ್. ರಂಗನಾಥನ್ ಅವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ವಿವರಿಸಿದರು. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ, ಮಾಹಿತಿ ಸಾಕ್ಷರತೆ ಹಾಗೂ ನಿರಂತರ ಸ್ವಯಂ ಕಲಿಕೆಯ ಮನೋಭಾವವನ್ನು ಬೆಳೆಸುವಲ್ಲಿ ಗ್ರಂಥಾಲಯದ ಪಾತ್ರದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಂಥಾಲಯ ಸಿಬ್ಬಂದಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ಪುಸ್ತಕ ಪ್ರದರ್ಶನ, ಇ-ಸಂಪನ್ಮೂಲಗಳ ಪರಿಚಯ ಹಾಗೂ ಗ್ರಂಥಾಲಯದ ವಿವಿಧ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಗ್ರಂಥಾಲಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮವು ಜ್ಞಾನ, ಓದು ಮತ್ತು ನಿರಂತರ ಕಲಿಕೆಯ ಮಹತ್ವವನ್ನು ಸಾರುವ ಮೂಲಕ ಯಶಸ್ವಿಯಾಗಿ ನೆರವೇರಿತು.



Comments